*ಗಡದನ್ನವರ ಹೋರಾಟದ ಕಿಚ್ಚು ಸದಾ ಅಮರ: ಕೋಡಿಹಳ್ಳಿ ಚಂದ್ರಶೇಖರ

ವರದಿ: ಶಿವಾನಂದ ನೇಗಿನಾಳ

ಮಹಾಲಿಂಗಪುರ: ರೈತರ ಬೆನ್ನಿಗೆ ಬಲವಾಗಿ ನಿಂತವರು ದಿ.ರಮೇಶ ಗಡದನ್ನವರ. ದೈಹಿಕವಾಗಿ ನಮ್ಮನು ಅಗಲಿದ್ದರೂ ಅವರ ಹೋರಾಟದ ಕಿಚ್ಚು ಸದಾ ಅಮರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಪಟ್ಟಣದ ಹೊರವಲಯದ ಬುದ್ನಿ ಪಿ.ಡಿ.ಯಲ್ಲಿರುವ ಗಡದನ್ನವರ ವೃತ್ತದಲ್ಲಿ ರವಿವಾರ ಸಂಜೆ ಹಮ್ಮಿಕೊಂಡಿದ್ದ ದಿ.ರಮೇಶ ಗಡದನ್ನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಡದನ್ನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗಡದನ್ನವರ ಅವರು ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ವಸೂಲಿ ಮತ್ತು ರೈತರ ಸ್ವಾಭಿಮಾನಕ್ಕಾಗಿ ಅವರು ಹಸಿರು ಶಾಲು ಹಾಕಿ ತೀವ್ರ ಹೋರಾಟ ನಡೆಸಿದ್ದರು. ಅವರ ಹೋರಾಟದ ಕಿಚ್ಚು ಇಂದಿಗೂ ರೈತರಲ್ಲಿ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಮಾತನಾಡಿ, ರೈತ ಸಮೂಹದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಹುಟ್ಟು ಹೋರಾಟಗಾರ ದಿ. ರಮೇಶ ಗಡದನ್ನವರ. ಅವರ ಉಸಿರು ಇರದಿದ್ದರೂ ಪ್ರತಿ ರೈತರ ಉಸಿರಲ್ಲೂ ಅವರು ಇದ್ದಾರೆ.
ರಮೇಶ ಗಡದನ್ನವರ ಕೇವಲ ಈ ಭಾಗದ ರೈತ ಸಮೂಹಕ್ಕೆ ಸಿಮೀತವಾಗದೇ ಉತ್ತರ ಕರ್ನಾಟಕದ ರೈತರ ಎಲ್ಲ ಕಷ್ಟಗಳಿಗೆ ಸ್ಪಂದಿಸಿದ ಹೆಮ್ಮೆಯ ರೈತ ನಾಯರಾಗಿದ್ದರು ಎಂದರು.

ರೈತ ನಾಯಕ ಗಂಗಾಧರ ಮೇಟಿ ಮಾತನಾಡಿ, ರೈತಪರ ಹೋರಾಟ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹೋರಾಟ ಮಾಡಿದ್ದ ಅಗ್ರಗಣ್ಯ ನಾಯಕ ನಮ್ಮ ರಮೇಶಣ್ಣಾ ಗಡದನ್ನವರ ಎಂದರು.

ಈ ವೇಳೆ ರೈತ ಮುಖಂಡರಾದ ಬಂದು ಪಕಾಲಿ, ದುಂಡಪ್ಪ ಮಾಂಗ, ಲಕ್ಷ್ಮಣ ಬ್ಯಾಳಿ, ಮಹಾಲಿಂಗಪ್ಪ ಇಟ್ನಾಳ, ಶಿವಲಿಂಗ ಟಿರಕಿ, ಶ್ರೀಶೈಲ ಕಲ್ಯಾಗೋಳ, ವೀರೇಶ ಆಸಂಗಿ, ಅಪ್ಪಾಸಾಬ ನಾಲಬಂದ, ಪರಸಪ್ಪ ಕೊಣ್ಣೂರ, ರಫೀಕ ಮಾಲದಾರ್, ಮಲ್ಲಪ್ಪ ಮಾಂಗ, ಕರೆಪ್ಪ ಮೇಟಿ, ರಾಜು ಪಾತ್ರೋಟ ಸೇರಿದಂತೆ ಇನ್ನಿತರರು ಇದ್ದರು.

7tv Karnataka
पत्रकार बंधु भारत के किसी भी क्षेत्र से जुड़ने के लिए सम्पर्क करें