ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಯಿಂದ ಜನರು ಪರದಾಡಿದರು. ಸಿಡಿಲು ಮತ್ತು ಗುಡುಗಿನ ಅಬ್ಬರ ಜೋರಾಗಿತ್ತು.
ಮೂರು ದಿನಗಳ ಹಿಂದೆ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ ಬಳಿಕ ಇಂದು ಮತ್ತೆ ಬೆಳಗಾವಿಗೆ ಮಳೆರಾಯ ಎಂಟ್ರಿ ಕೊಟ್ಟ. ಮಂಗಳವಾರ ಬೆಳಗ್ಗೆಯಿಂದ ಭಾರಿ ಬಿಸಿಲು ಇತ್ತು. ಸಂಜೆ 4 ಗಂಟೆ ಹೊತ್ತಿಗೆ ಏಕಾಏಕಿ ಜೋರಾಗಿ ಮಳೆ ಸುರಿಯಿತು. ಪರಿಣಾಮ ನಗರದ ಅನೇಕ ರಸ್ತೆಗಳ ತುಂಬಾ ನೀರು ಹರಿಯಿತು. ಬಹುತೇಕ ರಸ್ತೆಗಳು ಹೊಳೆಯ ಸ್ವರೂಪ ಪಡೆದುಕೊಂಡಿದ್ದವು.
ವಿವಿಧ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ನಾಗರಿಕರು, ಶಾಲಾ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಮಹಾಮಳೆಗೆ ಬೆಚ್ಚಿ ಬಿದ್ದರು. ವರುಣನ ಆರ್ಭಟದಿಂದ ಜನರ ಓಡಾಟ ಸ್ತಬ್ಧವಾಗಿ ಮಳೆಯಿಂದ ರಕ್ಷಿಸಿಕೊಳ್ಳಲು ರಸ್ತೆ ಪಕ್ಕದ ಕಟ್ಟಡಗಳು, ಅಂಗಡಿ, ಹೋಟೆಲ್ ಸೇರಿ ಮತ್ತಿತರ ಕಡೆ ಸಾರ್ವಜನಿಕರು ಆಶ್ರಯ ಪಡೆದುಕೊಂಡರು.