ವರದಿ: ಶಿವಾನಂದ ನೇಗಿನಾಳ
ಮಹಾಲಿಂಗಪುರ: ಸುಂದರ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರರ ಚಿಂತನೆ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.
ಸ್ಥಳೀಯ ತಾಲೂಕು ಹೋರಾಟ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಜಯಂತಿ ದಿನದಂದೇ ಮಹಾಲಿಂಗಪುರ ತಾಲೂಕಿಗಾಗಿ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗಿತ್ತು. ತಾಲೂಕು ಹೋರಾಟಕ್ಕೆ ಇಂದಿಗೆ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. ಬಾಬಾಸಾಹೇಬರ ತತ್ವದೊಂದಿಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದರು.
ರೈತ ಸಂಘದ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಹಿಡಿತದ ಪ್ರತಿಷ್ಠೆಗಳಿಲ್ಲದ, ಅಸ್ಪೃಶ್ಯತೆಯ ತೊಡಕುಗಳಿಲ್ಲದ ಸಮತ ಭಾವದ ದೇಶವನ್ನು ಕಟ್ಟಬೇಕು. ಕೆಳವರ್ಗದವರಲ್ಲಿ ಮಾನವೀಯ ಘನತೆಯ ಸ್ವಾಭಿಮಾನವನ್ನು ಚಿಗುರಿಸುವುದು ಅಂಬೇಡ್ಕ ಅವರ ಬದುಕಿನ ಧ್ಯೇಯವಾಗಿತ್ತು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ನಿಂಗಪ್ಪ ಬಾಳಿಕಾಯಿ ಮಾತನಾಡಿ, ಅಸಮಾನತೆ, ಮೇಲು-ಕೀಳು ಮಾನವ ನಿರ್ಮಿತವಲ್ಲ. ಇವುಗಳನ್ನು ಹೋಗಲಾಡಿಸಲು ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಸಂವಿಧಾನ ಎಂಬ ಪವಿತ್ರ ಗ್ರಂಥ ನೀಡಿದ್ದಾರೆ. ಈ ಮೂಲಕ ಸಮಾನತೆ ಸಾರಿದ್ದಾರೆ ಎಂದರು.
ಈ ವೇಳೆ ನೇಕಾರ ಮುಖಂಡ ಶಿವಲಿಂಗ ಟಿರಕಿ, ವೀರೇಶ ಆಸಂಗಿ, ಸಿದ್ದಪ್ಪ ಶಿರೋಳ, ರಫೀಕ್ ಮಾಲದಾರ, ಈಶ್ವರ ಮುರಗೋಡ, ಬಿ.ಎಂ.ಸತ್ತಿಗೇರಿ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಭೀಮಪ್ಪ ನಾಯಕ, ಹಣಮಂತ ವಗ್ಗರ, ರಾಜೇಂದ್ರ ಮಿರ್ಜಿ ಸೇರಿದಂತೆ ಇನ್ನಿತರರು ಇದ್ದರು.