ವಿಜೃಂಭಣೆಯಿಂದ ಜರುಗಿದ ಮಹಾಲಿಂಗಪುರ ಐದೇಶಿ

ವರದಿ: ಶಿವಾನಂದ ನೇಗಿನಾಳ

ಮಹಾಲಿಂಗಪುರ: ಪುರದೊಡೆಯ ಶ್ರೀ ಗುರು ಮಹಾಲಿಂಗೇಶ್ವರರ ಕಂಬಿ ಮಲ್ಲಯ್ಯನ (ಶ್ರೀ ಮಲ್ಲಿಕಾರ್ಜುನ) ಐದೇಶಿ ಉತ್ಸವವು ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿತು.

ಉತ್ತರ ಕರ್ನಾಟಕ ಭಾಗದಲ್ಲಿ ‘ಐದೇಶಿ’ ವಿಶಿಷ್ಠ ಆಚರಣೆಯಾಗಿದ್ದು, ಇಲ್ಲಿನ ಐದೇಶಿ ಉತ್ಸವಕ್ಕೆ ಬಹುತೇಕ ಜನರು ಮನೆಯನ್ನು ಶುಚಿಗೊಳಿಸಿ ಸಂಬಂಧಿಕರನ್ನು ಆಹ್ವಾನಿಸಿದ್ದರು. ಸಂಜೆ 6ರಿಂದ ಮಹಾಲಿಂಗೇಶ್ವರ ಮತ್ತು ಮಲ್ಲಯ್ಯನ ದೇವಸ್ಥಾನಕ್ಕೆ ಬಂದು ಕಂಬಿ ಮಲ್ಲಯ್ಯನಿಗೆ ಬೆಲ್ಲ ಹಂಚಿದರು. ಮಹಿಳೆಯರೆಲ್ಲರೂ ಆರತಿ ಸಮೇತ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.

ಐದೇಶಿ ನಿಮಿತ್ತ ಮಹಾಲಿಂಗೇಶ್ವರ ಮತ್ತು ಮಲ್ಲಯ್ಯ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಂಜೆ 6.30ಕ್ಕೆ ಮಲ್ಲಯ್ಯ ಕಂಬಿಗಳನ್ನು ಮಹಾಲಿಂಗೇಶ್ವರ ಗರ್ಭಗುಡಿಯ ಮುಂಭಾಗದಲ್ಲಿ ಇಟ್ಟು ಮಹಾಲಿಂಗೇಶ್ವರ ರಾಜೇಂದ್ರ ಶ್ರೀಗಳು ಪೂಜೆ ಸಲ್ಲಿಸಿ, ಬೆಲ್ಲ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಆಗಮಿಸಿದ ಸಾವಿರಾರು ಭಕ್ತರು, ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿ ಮೆರೆದರು. ಶ್ರೀಶೈಲ ಪಾದಯಾತ್ರೆ ಮುಗಿಸಿ ಬಂದವರಿಗೆ ಸಂಬಂಧಿಕರು ವಸ್ತ್ರಗಳ ಕಾಣಿಕೆ ನೀಡಿದರು. ದೇವರ ಬಿರುದಾವಳಿ ಮಾಡಿಸಿ ಕಾಣಿಕೆ ಸಲ್ಲಿಸಿದರು. ಐದೇಶಿ ದಿನ ಇಡೀ ಊರಲ್ಲಿ ಹಬ್ಬದ ವಾತಾವರಣ ಸಷ್ಟಿಯಾಗಿತ್ತು. ಆಹೋರಾತ್ರಿ ಕರಡಿ ಮಜಲು ಕಾರ್ಯಕ್ರಮ ಜರುಗುವವು. ಈ ಮೂಲಕ ಹೋಳಿ ಹುಣ್ಣಿಮೆ ಹಬ್ಬದ ದಿನದಿಂದ ಸ್ಥಗಿತವಾಗಿದ್ದ ಶುಭ ಕಾರ್ಯಗಳು ಐದೇಶಿ ಉತ್ಸವದ ಮರುದಿನದಿಂದ ಚಾಲನೆ ಪಡೆಯಲಿವೆ.

ನಿಮ್ಮ 7ಟಿವಿ ಕರ್ನಾಟಕ ಸುದ್ದಿ ವಾಹಿನಿಯು ಇಂದಿನಿಂದ ಶ್ರೀಗುರು ಮಹಾಲಿಂಗೇಶ್ವರ ಆಶೀರ್ವಾದದೊಂದಿಗೆ ಸಾಂಪ್ರದಾಯಕವಾಗಿ ಸ್ಥಳೀಯ ಸುದ್ದಿಗಳನ್ನು ಬಿತ್ತರಿಸುವ ಕಾರ್ಯ ಶುರು ಮಾಡಲಿದೆ.

7tv Karnataka
पत्रकार बंधु भारत के किसी भी क्षेत्र से जुड़ने के लिए सम्पर्क करें