ಜಮಖಂಡಿ: ದೇಶದಾದ್ಯಂತ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.
ತಾಲೂಕು ಆಡಳಿತದಿಂದ ನಗರದ ಬಿಎಲ್ ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್ಎಸ್ ಕಲೆ ಹಾಗೂ ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಭಾರತ ಜನಗಣತಿ 2026-27ರ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2011ರಲ್ಲಿ ಜನಗಣತಿ ನಡೆದಿತ್ತು, ಪುನಃ 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕರೊನಾ ಕಾರಣದಿಂದ ನಡೆದಿರಲಿಲ್ಲ. ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣ, ಅವರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಅವರ ಜೀವನ ಮಟ್ಟವನ್ನು ಒಂದು ದತ್ತಾಂಶದ ರೀತಿಯಲ್ಲಿ ಸಮಗ್ರವಾಗಿ ಸಂಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ದೇಶದ ಆರ್ಥಿಕ ಯೋಜನೆಗಳ ರೂಪಿಸಲು ಜನಗಣತಿ ಮಹತ್ತರವಾದ ಕಾರ್ಯವಾಗಿದೆ ಎಂದರು.
ಉಪಪ್ರಚಾರ್ಯ ಡಾ.ಡಿ.ಎಸ್. ನಿಟ್ಟೂರ ಮಾತನಾಡಿ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಜನಗಣತಿಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.
ಉಪಪ್ರಾಚಾರ್ಯ ಪ್ರೊ.ಮಲ್ಲಿಕಾರ್ಜುನ ಬೀರಣ್ಣ, ಜನಗಣತಿ ಶಾಖೆಯ ಸಿಬ್ಬಂದಿ ವರ್ಗ, ಗ್ರಾಮಾಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು,ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.